ಮಿಂಚೆಂಬ ಬಳ್ಳಿಗೆ ಮೇಘದ ಆಸರೆ

ಎಲ್ಲದಕ್ಕೂ ನಮಗೆ ಕಾಳಿದಾಸನೇ ಬೇಕು! ಹಳೆಯ ಕನ್ನಡ ಹಾಡಿನಲ್ಲಿಯೂ ಕಾಳಿದಾಸ ತುಂಬಿದ್ದಾನೆ –

“ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ” ಎಂಬ ಅಣ್ಣಾ ಅವರ “ನಾ ನಿನ್ನ ಮರೆಯಲಾರೆ” ಚಿತ್ರದ ಹಾಡಿನಲ್ಲಿ “ಮಿಂಚೆಂಬ ಬಳ್ಳಿಗೆ ಮೇಘದ ಆಸರೆ” ಎಂಬ ಸಾಲು ಬರುತ್ತದೆ (ಸಾಹಿತ್ಯ ಚಿ. ಉದಯಶಂಕರ್).

ಇದು ಮೇಘದೂತದಲ್ಲಿ ಇರುವ ಕಾಳಿದಾಸನ ಕಲ್ಪನೆ ಎಂದು ಎಷ್ಟು ಜನಕ್ಕೆ ತಿಳಿದಿದೆಯೋ ಗೊತ್ತಿಲ್ಲ. ಮೊದಲು

ನೀತ್ವಾ ರಾತ್ರಿಂ ಚಿರವಿಲಸನಾತ್ಖಿನ್ನವಿದ್ಯುತ್ಕಲತ್ರಂ
(ನೀತ್ವಾ ರಾತ್ರಿಂ ಚಿರವಿಲಸನಾತ್ ಖಿನ್ನ ವಿದ್ಯುತ್ ಕಲತ್ರಂ)

ವಿದ್ಯುತ್ ಎಂದರೆ ಮಿಂಚು, ಕಲತ್ರಂ ಎಂದರೆ ಹೆಂಡತಿ

ರಾತ್ರಿಯನ್ನು ಮಿಂಚೆಂಬ ಹೆಂಡತಿಯೊಂದಿಗೆ ಸತತ ವಿಲಸನದಿಂದ ಕಳೆದು ( ಮಿಂಚುತ್ತಾ ಎಂದು ) ಸುಸ್ತಾಗಿ ಎಂಬಲ್ಲಿ ಮೋಡವು ಪತಿ / ಗಂಡ / ರಮಣ ಎಂದೂ ಮಿಂಚು / ವಿದ್ಯುತ್ / ಸೌದಾಮನೀ ಪತ್ನಿ / ಹೆಂಡತಿ / ರಮಣಿ ಎಂದೂ ಹೇಳಿದ್ದಾನೆ.

ಮೇಘಸಂದೇಶದ ಕೊನೆಯಲ್ಲಿ ತನ್ನ ಪ್ರಿಯತಮೆಗೆ ಸಂದೇಶ ನೀಡಿದ ಮೇಲೆ, ‘ಹೇ ಮೇಘನೇ, ನಿನಗೆ ನಿನ್ನ ಪತ್ನಿಯಾದ ವಿದ್ಯುತ್ತಿನಿಂದ ವಿರಹ ಉಂಟಾಗದಿರಲಿ” ಎನ್ನುತ್ತಾನೆ. ( ಮಾ ಭೂದೇವಂ ಕ್ಷಣಮಪಿ ಚ ತೇ ವಿದ್ಯುತಾ ವಿಪ್ರಯೋಗಃ । ” )

ಏನೇ ಆದರೂ ಹಳೇ ಗಂಡನ ಪಾದವೇ ಗತಿ!

***

मधुरसार्द्रकालिदाससूक्तयः

मधुरसार्द्रकालिदाससूक्तयः

ಹರ್ಷಚರಿತದಲ್ಲಿ ಕಾಳಿದಾಸನ ಬಗೆಗೆ ಬಾಣಭಟ್ಟನ ಮಾತು –

निर्गतासु न वा कस्य कालिदासस्य सूक्तिषु।
प्रीतिर्मधुरसार्द्रासु मञ्जरीष्विव जायते॥

ಅನ್ವಯ:
मधुरसार्द्रासु मञ्जरीषु इव निर्गतासु कालिदासस्य सूक्तिषु कस्य वा प्रीतिः न जायते

ಮಧುರಸದಿಂದ/ಜೇನಿನಿಂದ ಒದ್ದೆಯಾದ (ತುಂಬಿದ) ಮಂಜರಿಯಂತೆ / ಮನೋಹರವಾದ ರಮಣೀಯವಾದ ಹೂಗೊಂಚಲಿನಂತೆ ಇರುವ ಕಾಳಿದಾಸನ ಮಾತುಗಳು/ಸೂಕ್ತಿಗಳು ಹೊರಟಿರಲು (ಅವನಿಂದ ಹೊರಚಿಮ್ಮಿರಲು) ಯಾರಿಗಾದರೋ ಪ್ರೀತಿಯು ಹುಟ್ಟದೇ ಇರುತ್ತದೆಯೇ!

ಕೆಲವು ಅಂಶಗಳುಃ
ಮಂಜು ಎಂಬ ಸಂಸ್ಕೃತದ ಪದದ ಅರ್ಥವೇ ರಮಣೀಯ, ಮನೋಹರ ಎಂದು.
ಆ ರೀತಿಯಾಗಿ ಇರುವ ಹೂಗೊಂಚಲು ಮಂಜರೀ. ಆದ್ದರಿಂದ ಬರಿಯ ಆ ಪದದ ಬಳಕೆಯಿಂದಲೇ ಬಾಣಭಟ್ಟನು ವಿಶೇಷಣವನ್ನು ತುಂಬಿ ಆಗಿದೆ. ಅಂತಹ ಮಂಜರಿಯು ಮಧುರಸದಿಂದ ತುಂಬಿದ್ದೇ ಅಲ್ಲವೇ!

ಕಾಳಿದಾಸನ ಉಕ್ತಿ ಎನ್ನದೇ ಸೂಕ್ತಿ ಎಂದದ್ದರಿಂದ ಕಾಳಿದಾಸನು ಹೇಳಿದ್ದೆಲ್ಲವೂ ಚೆನ್ನಾಗಿಯೇ ಒಳ್ಳೆಯದಾಗಿಯೇ ಇದೆ ಎಂಬ ಭಾವನೆಯೂ ಮುಂಚಿನ ವಿಶೇಷಣಗಳು ಇಲ್ಲದೆಯೂ ವ್ಯಕ್ತವಾಗುತ್ತವೆ.

ಇದರಿಂದ ಬಾಣಭಟ್ಟನು ಕಾಳಿದಾಸನನ್ನು ಬಹುವಾಗಿ ಮೆಚ್ಚಿದ್ದ ಎಂಬುದರಲ್ಲಿ ಸಂದೇಹವಿಲ್ಲ.

ಪಾಠಾಂತರ:-
ಮಧುರ-ಸಾಂದ್ರಾಸು
ಇಲ್ಲಿ ಮಧುರತೆಯು ಸಾಂದ್ರವಾಗಿ ದಟ್ಟವಾಗಿ ಇರುವ ಹೂಗೊಂಚಲು ಎಂದು ಅರ್ಥ ಬರುತ್ತದೆ. ಆದರೂ ಜೇನು ತುಂಬಿದ ಎಂಬುದೇ ಹೆಚ್ಚು ಸರಿಯಾಗಿದೆ ಎನಿಸುತ್ತದೆ.

ಗೀರ್ವಾಣಿಯ ನುತಿ

ಗೀರ್ವಾಣಿಯ ನುತಿ

ಗಬ್ಬವಿದೆ ಕಬ್ಬಗಳ
ಗಾನವಿದೆ ತಾನಗಳ
ಗಿಳಿಯಿಂಚರದ ಹಾಗೆ!
ಗೀರ್ವಾಣಿ, ನಾಲಗೆಯು
ಗುರುತರದ ಮಾತನೊಳ-
ಗೂಡಿಸುವಂತೆ ಮಾಡು;
ಗೃಹದಿ ನೆಲಸು, ಮನದ
ಗೆಳೆತನವು ನುಡಿವೆಣ್ಣ
ಗೇಯದಲಿ ತೊಡಗಿ, ಅಂ-
ಗೈಯ ನಡುವೆ ನೀನೆಮ
ಗೊಲಿದೆಮ್ಮ ಮನದರಿವ
ಗೋಚರದ ಸಂತಸವ
ಗೌರವಸ್ತ್ರಳೆ ನೀಡು